ಆಪ್ಘಾನಿಸ್ತಾನದಲ್ಲಿ ಹೆರಾತಿನ ಆಗ್ನೇಯದ ಘೋರ್ ಸಂಸ್ಥಾನವನ್ನಾಳುತ್ತಿದ್ದು, ಕ್ರಮೇಣ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡು ಆಳಿದ ಸುಲ್ತಾನರು. ಇವರು ಆಪ್ಘನರೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಪುರ್ವ ಪರ್ಷಿಯನರ ಮೂಲದವರೆಂದು ಮತ್ತೆ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇವರು ಮೊದಲು ಘಜಿû್ನ ಸಾಮ್ರಾಜ್ಯಕ್ಕೆ ಅಧೀನರಾಗಿದ್ದರು. ಅದರ ಅವನತಿಯ ಅನಂತರ ಘೋರಿಗಳು ಪ್ರಬಲರಾದರು. ಇವರಿಗೂ ಘಜಿû್ನಗಳಿಗೂ ಘರ್ಷಣೆ ಆರಂಭವಾಯಿತು. ಘಜಿû್ನಯ ಬಹ್ರಾಂ ಷಾ ಎಂಬವನು ಘೋರಿ ಸುಲ್ತಾನ ಕುತ್ಬ್-ಉದ್-ದೀನ್ ಮಹಮ್ಮದನನ್ನೂ ಅವನ ತಮ್ಮ ಸೈಫ್-ಉದ್-ದೀನನನ್ನೂ ಕೊಲ್ಲಿಸಿದ. ಇವರಿಬ್ಬರ ಸೋದರ ಅಲಾ-ಉದ್-ದೀನ್ ಹುಸೇನ್ ಈ ಕೊಲೆಯ ಸೇಡು ತೀರಿಸಿಕೊಳ್ಳಲು ಘಜಿû್ನಯ ಮೇಲೆ ದಂಡೆತ್ತಿಹೋಗಿ ಅದನ್ನು ಕೊಳ್ಳೆ ಹೊಡೆದು ನಗರಕ್ಕೆ ಬೆಂಕಿ ಹಚ್ಚಿದ. ಈ ಕೃತ್ಯಕ್ಕಾಗಿ ಅವನಿಗೆ ಜಹಾನ್ಸೂಜ್ ಅಥವಾ ಪ್ರಪಂಚ ಭಸ್ಮಕ ಎಂಬ ಹೆಸರು ಬಂತು. ಬಹ್ರಾಮನ ಮಗ ಖುಸ್ರಾವ್ ಷಾನ್ನು ಘುeóï ತುರ್ಕ್ಮನರು ಘಜಿû್ನಯಿಂದ ಹೊಡೆದೋಡಿಸಿದರು. ಇವನು ಪಂಜಾಬಿಗೆ ಓಡಿಹೋದ. ಘಜಿû್ನ ಹತ್ತು ವರ್ಷಗಳ ಕಾಲ ಘುeóï ತುರ್ಕ್ಮನರ ವಶದಲ್ಲಿತ್ತು.

ಘೋರಿ ಸುಲ್ತಾನರು ಮತ್ತೆ ಪ್ರಬಲರಾಗಿ ಘಜಿû್ನಯನ್ನು ಹಿಡಿದುಕೊಂಡರು. ಅಲಾ-ಉದ್-ದೀನ್ ಹುಸೇನನ ಮಗ ಸೈಫ್-ಉದ್-ದೀನ್ ಮುಹಮ್ಮದ ಘುಜ್ ತುರ್ಕ್ಮನರೊಂದಿಗೆ ಯುದ್ಧಮಾಡುತ್ತಿದ್ದಾಗ ಸತ್ತಿದ್ದ. ಅವನ ದಾಯಾದಿಯೂ ಉತ್ತರಾಧಿ ಕಾರಿಯೂ ಆದ ಘಿಯಾಸ್-ಉದ್-ದೀನ್ ಮುಹಮದ್ ಘುಜ್ó ತುರ್ಕ್ಮನರನ್ನು ಓಡಿಸಿ, ತನ್ನ ತಮ್ಮ ಷಿಹಾಬ್-ಉದ್-ದೀನನನ್ನು ಘಜ್ನಿ ಪ್ರಾಂತ್ಯದ ಆಡಳಿತ ನೋಡಿಕೊಳ್ಳಲು ನೇಮಿಸಿದ. ಷಿಹಾಬ್-ಉದ್-ದೀನನಿಗೆ ಮುಯಿeóï-ಉದ್-ದೀನ್ ಮುಹಮ್ಮದ್ ಬಿನ್ ಸಾಮ್ ಎಂಬ ಹೆಸರು ಇದೆ. ಘೋರಿ ಮುಹಮ್ಮದ್ ಎಂದು ಜನರ ಬಾಯಲ್ಲಿರುವವನು ಈತನೆ.

ಘೋರಿ ಮುಹಮ್ಮದ್ 1175ರಲ್ಲಿ ಮೊದಲ ಬಾರಿಗೆ ಭಾರತದ ಮೇಲೆ ದಂಡಯಾತ್ರೆ ಕೈಗೊಂಡು ಮುಲ್ತಾನಿನ ಇಸ್ಮೇಲರನ್ನು ಸೋಲಿಸಿದ. ಉಚ್ ಕೋಟೆ ಅವನ ವಶವಾಯಿತು. 1178ರಲ್ಲಿ ಗುಜರಾತಿನ ಮೇಲೆ ನಡೆಸಿದ ಆಕ್ರಮಣ ವಿಫಲವಾಯಿತು. ಮರುವರ್ಷ ಪೆಷಾವರಿನ ಮೇಲೆ ಏರಿ ಹೋದ. ಅದು ಇವನ ವಶವಾಯಿತು. ಪಂಜಾಬಿಗೆ ದಂಡೆತ್ತಿಹೋಗಿ ಘಜ಼್ನವೀಡ್ ವಂಶದ ಕೊನೆಯ ದೊರೆಯನ್ನು ಸೋಲಿಸಿ ಸೆರೆ ಹಿಡಿದುಕೊಂಡ.

ಈ ಗೆಲುವಿನಿಂದ ಭಾರತದ ಮೇಲೆ ದಂಡಯಾತ್ರೆ ಮುಂದುವರಿಸಲು ಘೋರಿ ಮಹಮ್ಮದನಿಗೆ ಹೆಚ್ಚು ಅನುಕೂಲವಾಯಿತು. ಭಾರತದಲ್ಲಿ ಅವನು ಗಳಿಸಿದ ಜಯಗಳಲ್ಲಿ ಪೃಥ್ವೀರಾಜ್ ಚೌಹಾನನನ್ನು ಸೋಲಿಸಿದ್ದು ಮುಖ್ಯವಾದ್ದು. ಪೃಥ್ವೀರಾಜನ ವಿರುದ್ಧ ಥಾನೇಶ್ವರದ ಬಳಿಯಲ್ಲಿ ತರೈನ್ನಲ್ಲಿ ನಡೆದ ಕದನದಲ್ಲಿ (1190-91) ಮಹಮ್ಮದ್ ಅನೇಕ ಸೈನಿಕರನ್ನು ಕಳೆದುಕೊಂಡು ಸೋತು ಗಾಯಗೊಂಡು ಪಲಾಯನ ಮಾಡಿದ. ಎರಡನೆಯ ತರೈನ್ ಕದನದಲ್ಲಿ (1192) ಪೃಥ್ವೀರಾಜನನ್ನು ಸೋಲಿಸಿ ಕೊಂದ. ಈ ವಿಜಯದ ಅನಂತರ ದೆಹಲಿಯನ್ನು ಗೆದ್ದು, ಅಲ್ಲೂ ಅಜ್ಮೀರದಲ್ಲೂ ಹಿಂದೂ ಸಾಮಂತರನ್ನು ನೇಮಿಸಿ ಅನಂತರ ಸೈನಿಕ ನೆಲೆಗಳಾದ ಹಾಂಸೀ, ಕುಹ್ರಾಮ್, ಸುರ್ಸೂತಿ ಮತ್ತು ಸಿರ್ಹಿಂದ್ಗಳನ್ನು ಹಿಡಿದು ಭದ್ರಪಡಿಸಿದ. ಭಾರತದ ಈ ಪ್ರದೇಶಗಳನ್ನು ತನ್ನ ನೆಚ್ಚಿನ ಸೇವಕ ಕುತ್ಬ್-ಉದ್-ದೀನ್ ಐಬಕ್ನ ವಶಕ್ಕೊಪ್ಪಿಸಿ ಘಜಿû್ನಗೆ ಮರಳಿದ. 
1193ರಲ್ಲಿ ಮುಹಮ್ಮದ್ 50,000 ಅಶ್ವಸೇನೆಯೊಡನೆ ಮತ್ತೆ ಭಾರತಕ್ಕೆ ಬಂದ. ಈ ಬಾರಿ ಕನೌಜಿನ ಗಾಹದ್ವಾಲ ಮನೆತನದ ದೊರೆ ಜಯಚಂದ್ರನಿಗೆ ಸೋಲು ಕಾದಿತ್ತು. ಮಹಮ್ಮದ್ ಅನೇಕ ದೇವಾಲಯಗಳ ಮೇಲೆ ದಾಳಿ ಮಾಡಿದ. ಕಾಶಿಯೊಂದರಲ್ಲೇ ಸುಮಾರು ಒಂದು ಸಾವಿರ ದೇವಾಲಯಗಳು ನೆಲಸಮವಾದುವು. ಮಸೀದಿಗಳು ಎದ್ದವು. ಜನರು ಹಿಂಸೆ ಮತ್ತು ಲೂಟಿಗಳಿಗೆ ತುತ್ತಾದರು. ಗಾಹದ್ವಾಲರ ಬೊಕ್ಕಸ ಅವನ ಕೈಸೇರಿತು. ಅಂತ್ಯದಲ್ಲಿ ಗಾಹದ್ವಾಲರು ತಮ್ಮ ರಾಜ್ಯದ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾದರೂ ಅವರ ಐಶ್ವರ್ಯ ಮಹಮ್ಮದನದಾಯಿತು.

ಮಹಮ್ಮದ್ ಈ ಐಶ್ವರ್ಯದ ರಾಶಿಯೊಂದಿಗೆ ತನ್ನ ದೇಶಕ್ಕೆ ಮರಳಿದ ಮೇಲೆ ಎದ್ದ ದಂಗೆಗಳನ್ನು ಐಬಕ್ ಹತ್ತಿಕ್ಕಿ, ಘೋರಿ ರಾಜ್ಯವನ್ನು ಭದ್ರಪಡಿಸಿದ. ಅಲ್ಲದೆ ಸುಮಾರು 27 ಹಿಂದೂ ಮತ್ತು ಜೈನ ದೇವಾಲಯಗಳ ಸಾಮಗ್ರಿಯಿಂದ ದೆಹಲಿಯಲ್ಲಿ ಕುವ್ವತ್-ಉಲ್-ಇಸ್ಲಾಂ ಮಸೀದಿಯನ್ನು 1194ರಲ್ಲಿ ಕಟ್ಟಿಸಿದ. ಅಜ್ಮೀರದಲ್ಲಿ ವಿಶಾಲದೇವ ಕಟ್ಟಿಸಿದ್ದ ಸಂಸ್ಕೃತ ಪಾಠಶಾಲೆಯ ಮೇಲೂ ಎರಡು ವರ್ಷಗಳ ಅನಂತರ ಒಂದು ಮಸೀದಿ ಎದ್ದಿತು.

ಮಹಮ್ಮದ್ ಮತ್ತೆ ಭಾರತಕ್ಕೆ ಬಂದು ಗ್ವಾಲಿಯರ್ ಕೋಟೆಗೆ ಮುತ್ತಿಗೆ ಹಾಕಿದ. ಕೋಟೆಯನ್ನು ಜಯಿಸುವುದು ಸುಲಭವಾಗಲಿಲ್ಲ. ಸಲ್ಲಕ್ಷಣರಾಜ ಮುತ್ತಿಗೆ ತೆಗೆಯುವಂತೆ ಕೇಳಿಕೊಂಡಾಗ ಅದಕ್ಕೆ ಒಪ್ಪಿ, ಬಹಾವುದ್ದೀನ್ ತುಘ್ರಿಲ್ನನ್ನು ಶಾಂತಿ ಮಾತುಕತೆಗೆ ನೇಮಿಸಿ ಹಿಂದಿರುಗಿದ. ಕಾಲಾನುಕ್ರಮದಲ್ಲಿ ಗ್ವಾಲಿಯರ್ ದೆಹಲಿ ಸುಲ್ತಾನರ ಆಡಳಿತಕ್ಕೊಳಪಟ್ಟಿತು. ಮುಹಮ್ಮದ್ ಗೆದ್ದ ಪ್ರದೇಶಗಳನ್ನು ಐಬಕ್ ಭದ್ರಪಡಿಸಿದನಲ್ಲದೆ ಅವನ ಸಾಮ್ರಾಜ್ಯಕ್ಕೆ ಹೊಸ ಪ್ರದೇಶಗಳನ್ನೂ ಸೇರಿಸಿದ.

ಸ್ವದೇಶದಲ್ಲಿ ಘೋರಿ ಸಾಮ್ರಾಜ್ಯ ವಿಸ್ತರಣೆಗೆ ಖಾರeóï ಮಿಯನ್ ಮನೆತನ ಅಡ್ಡಿಯಾಗಿತ್ತು. ಅದರ ನಾಯಕ ತಕಷ್ ಸತ್ತ ಅನಂತರ ಉಂಟಾದ ಯಾದವೀ ಕಲಹದಲ್ಲಿ ಘೋರಿಗಳು ಮುಖ್ಯ ನಗರಗಳಾದ ನಿಷಾಪರ್, ತುಸ್, ಮೆರ್ವ್ಗಳನ್ನು 1201ರಲ್ಲಿ ವಶಪಡಿಸಿಕೊಂಡರು. ತಕಷನ ಅನಂತರ ಅಲಾ-ಉದ್-ದೀನ್ ಪಟ್ಟಕ್ಕೆ ಬಂದ ಅವನು ಹೆರಾತ್ವರೆಗಿನ ಪ್ರದೇಶಗಳನ್ನು ಘೋರಿಗಳಿಂದ ವಶಪಡಿಸಿಕೊಂಡ.

ಮಹಮ್ಮದನ ಅಣ್ಣ ಘಿಯಾಸ್-ಉದ್-ದೀನ್ 1203ರಲ್ಲಿ ತೀರಿಕೊಂಡಾಗ ಘೋರಿ ಮಹಮ್ಮದ್ ಘಜಿû್ನ, ಘೋರ್ ಮತ್ತು ದೆಹಲಿಗಳ ಸುಲ್ತಾನನೆಂದು ಘೋಷಿಸಿಕೊಂಡ. ಖ್ವಾರeóï ಮಿಯನ್ ಮನೆತನದವರೊಡನೆ ಹಗೆತನ ಮುಂದುವರಿಯಿತು. ಅವರಿಂದ ಮಹಮ್ಮದ್ 1205ರಲ್ಲಿ ಅನಭವಿಸಿದ ಸೋಲು ಅವನ ಗೌರವಕ್ಕೆ ಭಾರಿ ಪೆಟ್ಟು ಕೊಟ್ಟಿತು. ಖೊಕಾರರು ಮತ್ತು ಭಾರತದ ಇತರ ಗಿರಿಜನರು ಬಂಡೆದ್ದು ಮುಲ್ತಾನಿನ ರಾಜ್ಯಪಾಲನನ್ನು ಸೋಲಿಸಿದರು. ಅವರು ಲಾಹೋರನ್ನು ಲೂಟಿ ಮಾಡಿದರಲ್ಲದೆ ಲಾಹೋರ್-ಘಜಿû್ನ ರಸ್ತೆಯನ್ನು ಮುಚ್ಚಿದರು. ಇವರನ್ನು ಅಡಗಿಸುವುದು ಐಬಕನಿಗೆ ಸಾಧ್ಯವಾಗದಿದ್ದುದರಿಂದ, ಮುಹಮ್ಮದನೇ ಘಜಿû್ನಯಿಂದ ಬಂದು, ಇವರನ್ನು ಸೋಲಿಸಿದ. ಅನಂತರ ಲಾಹೋರಿಗೆ ತೆರಳಿ ಅಲ್ಲಿಯ ಪರಿಸ್ಥಿತಿಯನ್ನು ತಹಬಂದಿಗೆ ತಂದ. ಘಜಿû್ನಗೆ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ಮಹಮ್ಮದ್ ಕೊಲೆಗೆ ಈಡಾದ (1206).

ಅವನ ಅನಂತರ ಘೋರಿ ಸಾಮ್ರಾಜ್ಯ ಬಹಲ ಕಾಲ ಉಳಿಯಲಿಲ್ಲ. ಘೋರಿ ಮಹಮ್ಮದನಿಗೆ ಗಂಡುಮಕ್ಕಳಿರಲಿಲ್ಲ. ಅವನ ಅನಂತರ ಘೋರಿ ರಾಜ್ಯದ ಬಹುಭಾಗ ಖ್ವಾರಜ್ ಮಿಯನ್ ಮನೆತನದ ಒಡೆತನಕ್ಕೆ ಬಂದಿತು. ಸ್ವಲ್ಪ ಕಾಲದವರೆಗೆ ಘಜಿû್ನಯನ್ನು ಕಿರ್ಮಾನಿನ ರಾಜ್ಯಪಾಲ ತಾಜ್-ಉದ್-ದೀನ್ ಯಿಲ್ದಿeóï ಆಳುತ್ತಿದ್ದ. ಅವನು ಪದಚ್ಯುತನಾದ ಮೇಲೆ (1215) ಮಧ್ಯ ಏಷ್ಯದಲ್ಲಿ ಘೋರಿ ರಾಜ್ಯ ಕೊನೆಗೊಂಡಿತು. ಭಾರತದಲ್ಲಿ ಘೋರಿ ರಾಜ್ಯಕ್ಕೆ ಐಬಕ್ ಉತ್ತರಾಧಿಕಾರಿಯಾದ.	(ಎಚ್.ವಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ